Saturday, September 27, 2014

ದಿಟ್ಟ ಹೆಜ್ಜೆ









ಅಲರಾಂ ಹೊಡೆಯುತ್ತಿದೆ...

ಓ  ಆಗಲೇ ಏಳು ಗಂಟೆಯಾಗಿದೆ. ಎದ್ದು ಸ್ನಾನ ಮಾಡಿ ಅಡಿಗೆ ಕೆಲಸ ಮುಗಿಸಿದಾಗ  ಒಂದು ಬಗೆಯ ಆಲಸ್ಯವುಂಟಾಯಿತು. ಈಗಿನ್ನು ಏಳು ಗಂಟೆ. ಸಹನಾ ಮನೆಗೆ ಬರಲು ಇನ್ನು ಎರಡು ಗಂಟೆ ಬಾಕಿಯಿದೆ  ಎಂದು ಮತ್ತೊಮ್ಮೆ ಹಾಸಿಗೆಯ ಮೇಲುರುಳಿದೆ. ಬೇಡ ಬೇಡವೆಂದರೂ ನೆನಪಿನಲೆಗಳು ಉಕ್ಕಿ ಮನ ಒದ್ದಾಡಿತು.
ನನ್ನ ಮದುವೆಯ ಹಿಂದಿನ ಜೀವನ ಹೇಗಿತ್ತು, ಆದರೀಗ? ಅಕ್ಕ-ಭಾವನ ಪ್ರೀತಿ ತಂದೆ-ತಾಯಿ ಇಲ್ಲದ ಕೊರತೆ ನೀಗಿಸುವಲ್ಲಿ ಯಶಸ್ವಿಯಾಗಿತ್ತು. ಓದು, ಹಾಡು ಮತ್ತು ಆಟ  ಇಷ್ಟರ ಹೊರತಾಗಿ ಇನ್ನೇನು ಇರಲಿಲ್ಲ. ಆದರೀ  ವೈವಾಹಿಕ ಜೀವನ ತನ್ನಲ್ಲಿ ಎಂತಹ ಬದಲಾವಣೆಗಳನ್ನು ತಂದಿದೆ. ಮದುವೆಯ ಮೊದಲಿನ ಕಾವ್ಯ ನಾನೇನ? ಎಂದು ನನ್ನನ್ನು ನಾನೇ  ಅನುಮಾನಿಸುವಷ್ಟು ಹೆಣ್ತನ ನನ್ನಲ್ಲಿ ಬೇರೂರಿತ್ತು.

ಆಕಾಶ್ ನ  ಪ್ರೀತಿ ನನ್ನ ಈ ಬದಲಾವಣೆಗೆ ಕಾರಣವಾಗಿತ್ತು.

ಆಕಾಶ್ ಚೆನ್ನೈಗೆ ಹೋಗಿ ಒಂದು ವಾರವಾಯಿತು. ಈ ಅವಧಿಯಲ್ಲಿ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಹೀಗೆಂದು ಮಾಡಿದವರಲ್ಲ.  ನಾನಿಲ್ಲಿ ಕಾಯುತ್ತಿರುವೆ ಎಂಬ ಪರಿವೆಯಾದರು ಬೇಡವೇ? ಮದುವೆಯಾಗಿ ಮೂರು ವರ್ಷವಾದರೂ ಆಕಾಶ್ ಎಂದು  ಉದಾಸೀನ ಮಾಡಿದ್ದಿಲ್ಲ. ಏನಾದರೂ ಕೆಟ್ಟದ್ದು ... ಛೇ!  ಏಕಿಂತ ದುರಾಲೋಚನೆ! ನನ್ನ ಮನಸ್ಸೇಕೆ  ಅಪಶ್ರುತಿ ನುಡಿಯುತ್ತಿದೆ?
ಆಕಾಶ್ ಗೆ ಏನು ಆಗುವುದಿಲ್ಲ. ಅವರಿಗೆ ಏನು ಆಗುವುದಿದ್ದರು ಅದು ನನಗೇ ಆಗಲಿ.

 ಆಕಾಶ್ ಹಾಗು ನನ್ನ ಮೊದಲ ಭೇಟಿಯಾದದ್ದು ಅಕ್ಕ ಸಹನಾಳ  ಮನೆಯಲ್ಲಿ. ವಧು ಪರೀಕ್ಷೆಯ ಶಾಸ್ತ್ರದ ದಿನ ನನ್ನನ್ನು ನೋಡಿದ ಆಕಾಶ್ ಅದ್ಯಾವ ಮೋಡಿಗೊಳಗಾಗಿ ನನ್ನನ್ನು ಮದುವೆಯಾದನೋ ಕಾಣೆ.
ತಿಳಿ ಗುಲಾಬಿ ಬಣ್ಣಕ್ಕೆ  ಹಸಿರು ಜರಿಯಂಚಿದ್ದ ಸೀರೆಯಲ್ಲಿ ಗೊಂಬೆಯಂತೆ ಕೂರಿಸಿದ್ದ ನನ್ನನ್ನು ಕಣ್ಣೆತ್ತಿಯೂ ನೋಡದ ಹುಡುಗನನ್ನು ಕಂಡು ಆಕಾಶ್ ಕೂಡ ನನ್ನಂತೆಯೇ ಮದುವೆಯ ವಿಷಯದಲ್ಲಿ ನಿರಾಸಕ್ತಿ ಉಳ್ಳವರು ಎಂದು ಮನದೇ ಹಿರಿ ಹಿರಿ ಹಿಗ್ಗಿದ್ದೆ.  ದೇವರೇ ಇವನೇ ನನ್ನನ್ನು ನಿರಾಕರಿಸಲಿ ಎಂದು ದೇವರಿಗೆ  ಮೊರೆಯಿಟ್ಟೆ.

" ಹುಡುಗನಿಗೆ ತಂದೆ-ತಾಯಿ ಕಾಲವಾಗಿ ೬-೭ ವರ್ಷವಾಯಿತಮ್ಮ. ಬಹು ದೊಡ್ಡ  ಕುಟುಂಬದವರು. ಇದ್ದೊಬ್ಬಳು ತಂಗಿಗೆ ಮಾಡುವೆ ಮಾಡಿ ಸಧ್ಯಕ್ಕೆ ಆರಾಮಾಗಿದ್ದಾನೆ. ನಿಮ್ಮ ಅಕ್ಕನದು ಒಂದೇ ಚಿಂತೆಯಮ್ಮ. ನಿಮ್ಮ ತಾಯಿ ಸಾಯುವ ಮೊದಲು ನಿಮ್ಮಕ್ಕನಿಂದ ಭಾಷೆ ತೆಗೆದುಕೊಂಡಿದ್ದರಂತೆ. ನಿನ್ನನ್ನು ಧಾರೆಯೆರೆದು  ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ನಿನ್ನ ಎಲ್ಲಾ  ಅಭಿಪ್ರಾ ಯಗಳಿಗೆ ಸಮ್ಮತಿಸುವ ಹುಡುಗನನ್ನೇ ಆರಿಸಿದ್ದೇವೆ. ದಯವಿಟ್ಟು ಇಲ್ಲ ಅನ್ನಬೇಡ ಕಾವ್ಯ. ನೀನು ಹೀಗೆ ಬಂದ ಗಂಡನ್ನೆಲ್ಲ ತಿರಸ್ಕರಿಸಿದರೆ, ನಿಮ್ಮಕ್ಕ ತುಂಬಾ ನೊಂದುಕೊಳ್ಳುತ್ತಾಳೆ ನೀನು ಅವನೊಡನೆ ಒಮ್ಮೆ ಮಾತಾನಾಡಿ ನಿರ್ಧರಿಸು.
 ಖಂಡಿತಾ ಒಪ್ಪುವೇ ತಾನೇ, ಪುಟ್ಟಿ?"  ಭಾವನ ಈ ನುಡಿಗಳು ಮೊದಲು ಕೋಪ ತರಿಸಿತಾದರು ಆಕಾಶ್  ಜೊತೆ ಮಾತನಾಡಲು ಒಪ್ಪಿದೆ.

ನನ್ನ ಮೌನ ಭೇದಿಸಿ ಆಕಾಶ್  ಮಾತಿಗೆ ಮೊದಲಾದ.  " ಕಾವ್ಯ, ನಾನು ಬ್ಯಾಂಕ್ ಆಫ್ ಬರೋಡದಲ್ಲಿ ಮ್ಯಾನೇಜರ್. ನನಗೆ ನಿಮ್ಮ ಆದರ್ಶಪ್ರಾಯ ಮನೋಭಾವ  ಬಹಳ ಹಿಡಿಸಿತು. ನೀವು ಮದುವೆಗೆ ಒಪ್ಪಿದರೆ, ನಿಮ್ಮ ಸಮಾಜ ಸೇವೆ ನಮ್ಮ ಮದುವೆಯ ನಂತರವೂ ಮುಂದುವರಿಯಲಿ. ಹಾಗೆ ನೀವು ಕನಸು ಕಂಡಂತೆ ನಮ್ಮ ಸ್ವಂತ ಮಗುವಿನೊಂದಿಗೆ ಮತ್ತೊಂದು ಮಗು ದತ್ತು ಪಡೆಯೋಣ. ನಿಮ್ಮ ನಿರ್ಧಾರವನ್ನು ಮನೆಯವರಿಗೆ ತಿಳಿಸಿ ಬಿಡಿ. ಇದಕ್ಕಿಂತ ಹೆಚ್ಚ್ಹು ಆಶ್ವಾಸನೆ ನೀಡಲಾರೆ".

ಇದಿಷ್ಟು ಸಾಕಿತ್ತು ನನಗೆ. " ತುಂಬಾ ಥ್ಯಾಂಕ್ಸ್ ಆಕಾಶ್. ನಾನು ಈ ಮದುವೆ  ಅಕ್ಕ ಭಾವನ ಬಲವಂತಕ್ಕೆ ಆಗಬೇಕೆನೋ ಎಂದಿದ್ದೆ. ಆದರೆ ನಿಮ್ಮ ನುಡಿಗಳು ನನಗೆ ಉತ್ತೇಜನ ನೀಡಿದೆ. ನಾನು ಅಕ್ಕನ ಆಶ್ರಯದಲ್ಲಿ ಬೆಳೆದಿದ್ದರಿಂದ ಅನಾಥೆಯೆನ್ನುವ ಕೊರಗು ಬರಲಿಲ್ಲ. ಆದರೆ ಒಂದು ಅನಾಥ ಮಗುವಿಗೆ ಜೀವನ ಕೊಟ್ಟರೆ ಅದಕ್ಕಿಂತ ಪುಣ್ಯದ ಕೆಲಸವಿಲ್ಲ. ನಿಮಗೆ ಇದೆಲ್ಲ ಹೇಳುವ ಕಾರಣವೇನೆಂದರೆ ನೀವೂ ಸಹ  ತಂದೆ ತಾಯಿ ಇಲ್ಲದೆ  ನಿಮ್ಮ ತಂಗಿ ಮಾಡುವೆ ಮಾಡಿಕೊಟ್ಟಿದೀರಿ. ತಂದೆ ತಾಯಿ ಅಗಲಿಕೆಯ   ನೋವಿನ ನೆರಳು ನಿಮ್ಮನ್ನಂಟಿದೆ. ನನ್ನ ಕನಸುಗಳಿಗೆ ನೀವೆಂದಿಗೂ ಕಡಿವಾಣ ಹಾಕುವ   ಪ್ರಯತ್ನ  ಮಾಡುವುದಿಲ್ಲ ಎಂದು ಮಾತು ಕೊಟ್ಟರೆ ನಾನು ಈ ಕ್ಷಣವೇ ಹಸೆಮಣೆ ಏರಲು ಸಿದ್ದ. "

" ಕಾವ್ಯ, ನಿನ್ನ ಕೈ ಹಿಡಿದು ಹೇಳುತ್ತಿರುವೆ. ನನ್ನ ಕಡೆಯುಸಿರಿರುವ  ತನಕ ನಿನ್ನ ಕೈ ಬಿಡುವುದಿಲ್ಲ. ನಿನ್ನ  ಕನಸು   ಇಂದಿನಿಂದ ನಮ್ಮ ಕನಸು.   ನಿನ್ನ  ಪ್ರತಿ ಹೆಜ್ಜೆಗೂ ನನ್ನ  ಭುಜದ ಆಸರೆಯಿದೆ. ನನ್ನನ್ನು ಸ್ನೇಹಿತನಂತೆ ಪರಿಗಣಿಸು. ನಿನ್ನ ಜೀವನ ನೀನೆಣಿಸಿದಂತೆಯೇ ಇರುವುದು. ನಿನ್ನ ಈ ದಿಟ್ಟ ಹಾಗು ನೇರ ನುಡಿಗಳಿಗೆ ನಾನು ಮನಸೋತಿರುವೆ. ನನ್ನನೆಂದಿಗೂ ಶಂಕಿಸ ಬೇಡ" ಎಂದು ನುಡಿದ ಆಕಾಶ್ ಗೆ ತಲೆ ಬಾಗಿದೆ.

ಆಕಾಶ್ ಮನಸ್ಸು ಆಕಾಶದಷ್ಟೇ ವಿಶಾಲ, ಇವನನ್ನು ಪಡೆದ ನಾನು ಪುಣ್ಯವಂತೆ ಎಂದೆಣಿಸಿ  ಮನದಲ್ಲಿ ನವಿರಾದ ಭಾವನೆಗಳು ಪುಟಿದೆದ್ದವು.

ಮದುವೆ  ವಿಜ್ರುಂಭಣೆಯಿಂದ ಜರುಗಿತು. ಆಕಾಶನ ನಿಷ್ಕಲ್ಮಶ ಪ್ರೀತಿಯಲ್ಲಿ ದಿನಗಳು ಹಾಗೆಯೇ  ಕಳೆದು ವರ್ಷವಾಗಿದ್ದು ತಿಳಿಯಲಿಲ್ಲ. ಆಕಾಶ್ ಮೊದಲನೆಯ ಮಗು ದತ್ತು ಪಡೆಯುವುದು ಹಾಗು ಎರಡನೆಯ ಮಗು ನಮ್ಮ ಸ್ವಂತದ್ದೆಂದು ಹೇಳಿದ್ದರು. ಆದರೆ ಈ ಒಂದು ವರ್ಷದಲ್ಲಿ ಆ ಮಾತಿನ ಸುಳಿವೇ ಇರಲಿಲ್ಲ. ವಿಷಯ ಪ್ರಸ್ತಾಪ ಮಾಡುವುದೇ  ಕೊರಿಯಾ- ಕಾಶ್ಮೀರ ಸಮಸ್ಯೆಯಾಗಿತ್ತು.

ವಿವಾಹ  ವಾರ್ಷಿಕೋತ್ಸವದ  ಮರು ದಿನ  ಆಕಾಶ್," ಕಾವ್ಯ, ನಾನು ನಿನ್ನನ್ನು ನೋಡಲು ಬಂದಾಗ ಉಟ್ಟಿದ್ದ ಪಿಂಕ್ ಸೀರೆ ಉಡು. ನಿನಗೊಂದು surprise ಕಾದಿದೆ" ಎಂದರು.
ಏನಿರಬಹುದು ಆ surprise  ಎಂದು ಊಹಿಸಲಾಗದೆ ಅಲಂಕರಿಸಿಕೊಂಡು ಹೊರಟೆ. ಏನೇ ಇರಲಿ, ಆಕಾಶ್ ಜೊತೆ ಸುತ್ತಾಡಿ ಬರುವುದೇ ಖುಷಿಯ ವಿಷಯ ಎಂದು ಕಾರ್ ಹತ್ತಿದೆ.

ಮನೆಯ ಮುಂದಿರುವ ಮಣ್ಣು ರಸ್ತೆಯ ಎಡ ಭಾಗಕ್ಕೆ ತಿರುಗಿದ ಕಾರ್, ಕೆಲವು ಮೈಲಿಗಳು ಚಲಿಸಿದ ನಂತರ ಹಸಿರಿನ ವನದಂತಹ ಪ್ರದೇಶಕ್ಕೆ ನುಗ್ಗಿತು. ಸ್ವಲ್ಪ ಹೊತ್ತಿನ ನಂತರ ಕಾರ್ ನಿಂತಾಗ ಎದುರಿಗೆ ಕಂಡಿದ್ದು " ಮಾತೃ ಅನಾಥಾಲಯ".
ಆಕಾಶ್ ಎಂದು ಅವನತ್ತ ನೋಡಿದಾಗ,ಶ್!!!  ಎಂದು ಸನ್ನೆ ಮಾಡಿ,  ಒಳಗೆ ಕರೆದೊಯ್ದ ಆಕಾಶ್.

"ಕಾವ್ಯ, ಈ ಅನಾಥಾಶ್ರಮ ನಿನಗೇನೂ ಹೊಸದಲ್ಲ. ನೀನು ಇಲ್ಲಿ ಎರಡು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದೆ ಎಂದು ತಿಳಿದೇ ಇಲ್ಲಿಗೆ ಕರೆ ತಂದೆ. ಕೆಲವರಿಗೆ ಪೂರ್ವಾಪರವಿದೆ. ಮತ್ತೆ ಕೆಲವರ ಜನ್ಮದಾತರು ಯಾರೆಂದೇ ತಿಳಿದಿಲ್ಲ. ನಿನಗೆ ಯಾವ ಮಗು  ಸೂಕ್ತವೋ ನೀನೆ ಆರಿಸು" ಎಂದು ಆಯ್ಕೆ ಮಾಡಲು ಬಿಟ್ಟ ಆಕಾಶ್ .

ಹುಟ್ಟಿ ಒಂದು ತಿಂಗಳಾದ ಮಕ್ಕಳು, ಒಂದರಿಂದ ಹತ್ತು ವಯಸ್ಸಿನ ಮಕ್ಕಳು ತುಂಬಿರುವ ಕೋಣೆಗೆ ಕರೆದೊಯ್ದ ಆಕಾಶ್.
ಆ ಮುಗ್ದ ಮುಖಗಳೆಲ್ಲವೂ ಸುಂದರವಾಗಿದ್ದವು. ಎಲ್ಲರ ನಡುವೆ ತಿಳಿಗೆಂಪು  ಬಣ್ಣದ ಒಂದು ವರ್ಷದ ಅನು ಬಹಳ ಹಿಡಿಸಿದಳು.
ದತ್ತು ಕ್ರಮಗಳೆಲ್ಲ ಮುಗಿಸಿ ಅನಾಥಾಶ್ರಮಕ್ಕೆ ವಿದಾಯ ಹೇಳಿ ಹೊರಟೆವು.
"ಆಕಾಶ್ ಇಲ್ಲಿಗೆ ಬರುವಾಗ ನಾವಿಬ್ಬರೇ ಬಂದೆವು. ಈಗ ಕುಟುಂಬವಾಗಿ ಹೋಗುತ್ತಿದ್ದೇವೆ. ನಿಮಗೆ ನನ್ನ ತುಂಬು ಹೃದಯದ ನಮನಗಳು. ನೀವು ಎಲ್ಲಿ ಮಾತಿಗೆ ತಪ್ಪುವಿರೋ ಎಂಬ ಹೆದರಿಕೆಯಿತ್ತು, ಆದರೆ ನೀವು ಕೊಟ್ಟ ಮಾತನ್ನು ಉಳಿಸಿಕೊಂಡಿರಿ. ನಿಮಗೆ ತುಂಬಾ ಥ್ಯಾಂಕ್ಸ್" ಎಂದು ಭುಜಕ್ಕೊರಗಿದೆ.

ಅನು  ಮನೆಗೆ ಕಾಲಿಟ್ಟೊಡನೆ ನಮ್ಮೆಲ್ಲರ ಮನ ಸಂತಸದ ಕಡಲಲ್ಲಿ ಮುಳುಗಿತು. ಅನುವಿಗಾಗಿ ಕೆಲಸ ಬಿಟ್ಟು " Full  time  mom " ಕೆಲಸ ಶುರು ಮಾಡಿದೆ.  ಅನು  ನನ್ನ ಜೀವದಷ್ಟು ಹತ್ತಿರವಾದಳು. ಮಕ್ಕಳೇ ಹಾಗೆ. ಅವರಿಗೆ ಮರುಳಾಗಲು ಒಂದೇ ದಿನ ಸಾಕು. ಆಕಾಶ್ ಇಲ್ಲದಿದ್ದರೂ ದಿನವೆಲ್ಲ ಅನು  ಇದ್ದರೆ  ಸಾಕು ಎನ್ನುವ ಬಾಂಧವ್ಯ ಒಡಮೂಡಿತ್ತು. ಬಹುಷಃ ಇವಳು ನನ್ನ ನನ್ನ ಹಿಂದಿನ ಜನ್ಮದಲ್ಲಿ ಮಗಳಾಗಿದ್ದಳೋ ಏನೋ. ಅವಳಿಗೆ frock  ತೊಡಿಸಿ, ಗೆಜ್ಜೆ ಹಾಕಿ, ಕಾಡಿಗೆ ಹಚ್ಚಿ, ತಲೆ ಬಾಚುವುದರಲ್ಲಿ ಎಲ್ಲಿಲದ ಸಂತಸ. ಅವಳಿಗೆ ಸ್ನಾನ ಮಾಡಿಸುವಾಗ ಅವಳ ತುಂಟ ಕೈಗಳು ನನ್ನ ಮುಖಕ್ಕೆ ನೀರೆರೆಚಿದಾಗ ನನ್ನ ಬಾಲ್ಯ ಮರುಕಳಿಸಿದ ಅನುಭವ. ನಾನಂತೂ ಅಮ್ಮನನ್ನು ಕಂಡಿಲ್ಲ. ಹೇಗೆ ಬೆಳೆದೆ ಅನ್ನೋ ನೆನಪೂ ಮಾಸಿ ಹೋಗಿದೆ.
ಈ ಮಗುವಿಗೆ ಆ ಸುಖ ನನ್ನಿಂದ ಸಿಗಲಿ ಎನ್ನುವ ಹಾರೈಕೆ. ಪ್ರತಿಯೊಬ್ಬ ಹೆಣ್ಣಿನಲ್ಲೂ ಒಬ್ಬ ತಾಯಿ ಇರುತ್ತಾಳೆ  ಎಂದು ಕೇಳಿದ್ದೆ ಆದರೆ ಆ ತಾಯ್ತನ ನನ್ನಲ್ಲಿ ಉದಯಿಸಿದ್ದು ಈ ಮುದ್ದು ಕಂದ  ಅನುವಿನಿಂದ.

ತದೇಕ ಚಿತ್ತದಿಂದ ಮಗುವಿನ ಮುಖವನ್ನೇ ನೋಡುತ್ತಿದ್ದ ನನ್ನನ್ನು ವಾಸ್ತವಕ್ಕೆ ತಂದಿದ್ದು ಟ್ರಿಣ್ ಟ್ರಿಣ್  ಟೆಲಿಫೋನ್ ಕರೆ.
ಮಗುವಿನ ನವಿರಾದ ಹಣೆಗೆ ಮುತ್ತಿಟ್ಟು ಕಾಲ್ receive  ಮಾಡಿದೆ. ಎಣಿಸಿದಂತೆಯೇ ಆಕಾಶ್ ನ ಧ್ವನಿ.
" ಹಲೋ ಆಕಾಶ್, ಏನಿದು ನೀವು ಒಂದು ವಾರ ಆದ ಮೇಲೆ ಕಾಲ್ ಮಾಡಿದ್ದೀರ? ಏನಾಯ್ತು? ನನಗಿಲ್ಲಿ ಎಷ್ಟು tension  ಆಗಿತ್ತು ಗೊತ್ತಾ? ಅಲ್ಲೇ ಯಾರಾದರು ಬೇರೆ ಹುಡುಗಿ ಜೊತೆ settle  ಆದ್ರೆನೋ ಅಂತ ಅನುಮಾನ ಬರ್ತಾ ಇದೆ".

"ತಲೆ ಕೆಟ್ಟ ಹಾಗೆ ಮಾತಾಡ ಬೇಡ ಕಾವ್ಯ. ನನಗೆ ನನ್ನದೇ ಆದ ಸಮಸ್ಯೆಗಳಿವೆ. ನಿನ್ನ ಜೊತೆ ಮಾತಾಡುವುದೊಂದೇ ಕೆಲಸವಲ್ಲ ".

ಆಕಾಶ್ ನ ಬಿರುಸಿನ ನುಡಿಯಿಂದ ಕಂಗಳು ತೇವವಾದವು.

"ಆಕಾಶ್ ನೀವು ಮನೆಗೆ ಬನ್ನಿ ಮಾತನಾಡೋಣ. ಈಗ ನಿಮ್ಮ mood ಸರಿ ಇಲ್ಲ ಅಂತ ಕಾಣುತ್ತೆ. "

" ಏನಿಲ್ಲ ಕಾವ್ಯ. ನಾನು ನಿನ್ನ ದಯೆಯಿಂದ ಸರಿಯಾಗೇ ಇದ್ದೀನಿ. ಒಂದು ವಾರ ನೆಮ್ಮದಿಯಾಗೆ ಕಳೆದೆ. ಈಗ ನನ್ನ ಗ್ರಹಚಾರ ಬದಲಾಗುತ್ತೆ. ಅರ್ಧ ಗಂಟೆಯಲ್ಲಿ ಮನೆಗೆ ಬರುವೆ. ಈಗ ಏರ್ಪೋರ್ಟ್ ಅಲ್ಲಿರುವೆ. ಬಿಸಿ ಉಪ್ಪಿಟ್ಟು ಮಾಡಿಡು. ಅದನ್ನು ಹೇಳಲೆಂದೇ ಕಾಲ್ ಮಾಡಿದ್ದು" ಕಾಲ್ ಡಿಸ್ಕನೆಕ್ಟ್ ಆಯಿತು.

ಇದೇನಿದು ಆಕಾಶ್ಗೆ ಏನಾಗಿದೆ? ಇಷ್ಟು ಒರಟಾಗಿ ಮಾತಾಡಲು ನನ್ನಿಂದ ಏನಾದರು ತಪ್ಪಯಿತಾ? ಅನು ಏಳುವ ಮೊದಲೇ ತಿಂಡಿ ಮಾಡಿ ಮುಗಿಸುವ ಎಂದು ಅಡಿಗೆ ಮನೆ ಕಡೆ ನಡೆದೆ. ಆದರು ಆಕಾಶನ ನುಡಿಗಳು ಕಪಾಳಕ್ಕೆ ಹೊಡೆದಂತೆ ಭಾಸವಾಗುತ್ತಿತ್ತು.

ಕಾಲಿಂಗ್ ಬೆಲ್ ಸದ್ದಿಗೆ ಓಡಿ ಹೋಗಿ ಬಾಗಿಲು ತೆಗೆದೆ.  ಮತಿಗೆಟ್ಟ ಆನೆಯಂತೆ ಒಳ ಬಂದ  ಆಕಾಶ್ ನನ್ನ ಮುಖವನ್ನು ಸಹ ನೋಡಲಿಲ್ಲ. ನಾನೇ ಸೋತು ಮಾತಾಡಿಸಿದೆ. " ಹೇಗಿದ್ದೀರಿ ಆಕಾಶ್? ಪ್ರಯಾಣ ಆಯಸಕರವಾಗಿತ್ತ?"
" ನಿನ್ನನ್ನು ನೋಡಲು ಬರುವ ಪ್ರತಿ ಗಂಡಸಿಗೂ ನಿನ್ನ ನೋಡಿದಾಕ್ಷಣ ಆಯಾಸ ನೆನಪಾಗಲ್ಲ".
" ಆಕಾಶ್,  ಏನೀ  ಮಾತಿನ ಅರ್ಥ" ಎಂದು ಚೀರಿದೆ.
" ವಿವೇಕ್ ನ ಕೇಳು ಕಾವ್ಯ. ನಾನೇನು ನಿನ್ನಷ್ಟು experienced  ಅಲ್ಲ."
" ಆಕಾಶ್, ಇವತ್ತು ನಿಮ್ಮ ಮನಸ್ಸು ಸರಿಯಿಲ್ಲ. ಸ್ನಾನ ಮಾಡಿ ತಿಂಡಿ ತಿಂದು, ಮಲಗಿ. ನಂತರ ಮಾತಾಡೋಣ."
" ವಿಶ್ರಾಂತಿಯ ಅವಶ್ಯಕತೆ ನಿನಗೆ ಹಾಗು ನಿನ್ನ ವಿವೇಕ್ ನ ಈ ಮಗುವಿಗಿದೆ, ನನಗಲ್ಲ."

"ನಾಲಿಗೆ ಬಿಗಿ ಹಿಡಿದು ಮಾತಾಡಿ  ಆಕಾಶ್. ನನ್ನ ಸ್ನೇಹಿತನ ಬಗ್ಗೆ ಹೀಗೆ ಕೀಳಾಗಿ ಮಾತಾಡಲು ನಿಮಗೆ ನಾಚಿಕೆ ಆಗ್ತಾ ಇಲ್ವಾ?"

" ಕದ್ದು ಆದ ಮಗುವನ್ನು ದತ್ತು ತೆಗೆದುಕೊಂಡ ನಿನಗೆ ನಾಚಿಕೆ ಇಲ್ಲ, ಇನ್ನು ನನಗೇಕೆ? ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕ ಕಣ್ಣು ಮುಚ್ಚಿಕೊಂಡಿರೋದಿಲ್ಲ ಕಾವ್ಯ. ಸಾಕು ಮಾಡು ನಿನ್ನ ನಾಟಕ. ನಾನು ನಿನ್ನ name  sake  husband. ನಿನ್ನ ಸರಸ ಸಲ್ಲಾಪ ಎಲ್ಲ ವಿವೇಕ್ ಜೊತೆ. ಈ ಒಂದು ವಾರ ಚೆನ್ನಾಗಿ enjoy  ಮಾಡಿರ್ಬೇಕಲ್ವ?"

" ಆಕಾಶ್, ನೀನೇನು ಕುಡಿದು ಬಂದಿರುವೆಯಾ?ನಿನ್ನ ಮೇಲೆ ಆಣೆ  ಮಾಡಿ ಹೇಳ್ತಾ ಇದ್ದೀನಿ. ನನಗೂ ವಿವೇಕ್ ಗೂ ಯಾವ ಸಂಬಂಧವೂ ಇಲ್ಲ. ನನ್ನ ಚರಿತ್ರೆಗೆ ಧಕ್ಕೆ ಬರುವ ಹಾಗೆ ಮಾತಾಡ  ಬೇಡ. ನಿಮಗೆ ಒಂದು ಸಿಹಿ ಸುದ್ದಿ ನೀಡೋಣ ಅಂತಿದ್ದೆ., ಆದರೆ ನೀವು.. ಛೆ!"

" ಏನದು ಸಿಹಿ ಸುದ್ದಿ ? ನಿನಗೂ ವಿವೇಕ್ ಗೂ ಇನ್ನೊಂದು ಮಗುನಾ?" ಇಷ್ಟು ಕೇಳಿ ನನ್ನ ಕೈ ಆಕಾಶ್ ಕೆನ್ನೆ ಮೇಲೆ ರಪ್  ಎಂದು ಹೊಡೆದಿತ್ತು. ಆಕಾಶ್ ಏನು react  ಮಾಡಲಿಲ್ಲ.

" ಈ ಸಂಜೆ ಅಹಲ್ಯ ಮನೆಗೆ ಬರ್ತಾ ಇದಾಳೆ. ನಿಮ್ಮಕ್ಕ ಸಹನಾ ಜೊತೆ ಮಾತಾಡು" ಎಂದು ಹೇಳಿ ಬಿರುಸಿನಿಂದ ಈಚೆ ಹೊರಟ  ಆಕಾಶ್.

ಆಕಾಶ್ ಜೊತೆ ಕಟ್ಟಿದ ಆಶಾಗೋಪುರ ಕುಸಿದಿತ್ತು. ನನ್ನನ್ನು ಮೆಚ್ಚಿ ಮದುವೆಯಾದ ಆಕಾಶ್ ಇವನೇನ? ಹೃದಯ ಹಿಂಡಿದಷ್ಟು ನೋವು. ಈ ಆಘಾತ ತಾಳಲಾರೆ. ಅಕ್ಕನ ಬಳಿ  ಮಾತಾಡು ಅಂತ ಅಂದಿದ್ದಾದರು ಯಾಕೆ? ಯಾರವಳು ಅಹಲ್ಯ? ಏನಿದು ಗೋಜಲು? ಎದೆಯಿಡಿದು ದಿಘ್ಭ್ರಾಂತಳಾಗಿ ಕುಸಿದೆ.

 ಆಕಾಶ್ ಹೋಗಿ ಅರ್ಧ ಗಂಟೆಯಲ್ಲಿ ಸಹನಾ ಬಂದಳು. ಅಕ್ಕನನ್ನ ನೋಡಿದೆ ಕಣೀರು ಕಟ್ಟೊಡೆಯಿತು.

" ಅಕ್ಕ, ಯಾರು ಈ ಅಹಲ್ಯ? ನಿನಗವಳು ಗೊತ್ತ? ಆಕಾಶ್..."  ಕಂಠ ಗದ್ಗದಿತವಾಯಿತು.

" ಕಾವ್ಯ, ಅಳಬೇಡಮ್ಮ.  ನಿನ್ನ ಜೀವನ ನಮ್ಮಿಂದಾಗಿ ಹಾಳಾಯಿತು. ಕೆಲವು ದಿನಗಳಿಂದ ನಿನ್ನಿಂದ ಒಂದು ವಿಷಯ ಮುಚ್ಚಿಟ್ಟೆ. ಹೃದಯ ಕಲ್ಲು ಮಾಡಿಕೊ. ಒಂದು ತಿಂಗಳ ಹಿಂದೆ ನಾನು ಆಕಾಶ್ ಜೊತೆ ಒಂದು ಹುಡುಗಿಯನ್ನು ನೋಡಿದೆ. ಒಮ್ಮೆಲೇ ಅನುಮಾನಿಸುವುದು ತಪ್ಪೆಂದು ಸುಮ್ಮನಾದೆ. ನಿಮ್ಮ ಭಾವ ಕೂಡ ನನ್ನ ಬಳಿ  ಇದೇ ಮಾತನ್ನು ಪ್ರಸ್ತಾಪಿಸಿದರು. ಒಮ್ಮೆ ಅಶೋಕ ಹೋಟೆಲ್ ಮುಂದೆ ಆಕಾಶ್ ನನ್ನು ಮತ್ತೆ ಅದೇ ಹುಡುಗಿ ಜೊತೆ ನೋಡಿದೆವು. ನಿಮ್ಮ ಭಾವ ಆ ಹುಡುಗಿ ಯಾರೆಂದು ಕೇಳಿದಾಗ ಆಕಾಶ್ ಒಂದು ಚೂರೂ ಅಂಜದೆ ಅವಳನ್ನು ನಮಗೆ ಪರಿಚಯಿಸಿದ".

" ಅಹಲ್ಯ ನನಗೆ ಬಹಳ ಹತ್ತಿರದವಳು. ಮದುವೆಗೆ ಮುಂಚೆ ನಾನು ಇವಳನ್ನು ಪ್ರೀತಿಸಿದ್ದೆ. ಇವಳ ತಂದೆಗಾಗಿ ನಾವು ಮದುವೆಯಾಗಲು ಸಾಧ್ಯವಾಗಲಿಲ್ಲ. ಅಹಲ್ಯಳಿಂದ  ದೂರವಾದ ನಾನು ಅವಳನ್ನು ಮರೆಯಲು ಕಾವ್ಯಳನ್ನು ಮದುವೆಯಾದೆ.
ಅದೃಷ್ಟವಶಾತ್ ಅಹಲ್ಯ ನಾನಗೆ ಮತ್ತೆ ಸಿಕ್ಕಳು. ನಮ್ಮಿಬ್ಬರ ನಡುವೆ ಈಗ ಅಗಾಧವಾದ ಪ್ರೀತಿ ಬೇರೂರಿದೆ. ನನಗೆ ಇವಳೇ ಹೆಂಡತಿ. ಕಾವ್ಯ ನನ್ನ ಪಾಲಿನ ಮುಳ್ಳು ಈಗ. ಅವಳೇನು ಕಡಿಮೆಯಿಲ್ಲ ಬಿಡಿ. ವಿವೇಕ್ ಜೊತೆ ಚೆನ್ನಾಗೆ ಇದ್ದಾಳೆ. ವಿವೇಕ್ ಮತ್ತೆ ಅವಳಿಗೆ ಹುಟ್ಟಿದ ಮಗುವನ್ನು  ಸಮಾಜದಿಂದ ಮುಚಿಟ್ಟು, ಗೊಡ್ಡು ಆದರ್ಶದ ನೆಪದಲ್ಲಿ ಅದೇ ಮಗುವನ್ನು ದತ್ತು ತೆಗೆದುಕೊಂಡು ಎಲ್ಲರ ಮುಂದೆ ಗ್ರೇಟ್ ಆದಳು. ನಾನು ಅವಳನ್ನು ಮದುವೆಯಾಗಿ ನನ್ನ ಜೀವನ ನರಕ ಮಾಡಿಕೊಂಡೆ. ಆ ಪುಣ್ಯ ನಿಮಗೆ ಸಲ್ಲ ಬೇಕು. ನೀವೇ ಅಲ್ಲವೇ ಮಾಡುವೆ ಮಾಡಿಸಿದ್ದು. ಇನ್ನೊಂದು ಸಿಹಿ ಸುದ್ದಿಯೆಂದರೆ, ಅಹಲ್ಯ ನನ್ನ ಮಗುವಿನ ತಾಯಿಯಾಗುತ್ತಿದ್ದಾಳೆ. ಅವಳು ಮುಂದಿನ ತಿಂಗಳಿಂದ ನಮ್ಮ ಮನೇಲೆ ಇರ್ತಾಳೆ. ಇದನ್ನ ನಿಮ್ಮ ನಾದಿನಿಗೆ ಹೇಳಿ. ಬೇಕಿದ್ದರೆ ಅವಳು ಅದೇ ಮನೇಲಿ ಇರಬಹುದು. ನಂದೇನು ಅಭ್ಯಂತರ ಇಲ್ಲ. ಆದರೆ ಆ ವಿವೇಕ್ ನಮ್ಮ ಮನೆ ಕಡೆ ತಲೆ ಕೂಡ ಹಾಕಿ ನೋಡೋ ಹಾಗಿಲ್ಲ" ಎಂದು ಮನಸ್ಸು ಬಂದಂತೆ ಹರಟಿದ.
ನಿಮ್ಮ ಭಾವ ಅವನ ಮೇಲೆ ಕೈ ಎತ್ತಿದರು. ಆದರೆ ಆ ಪಾಪಿ ಅವರಿಗೆ ಮತ್ತೆ ಹೊಡೆದ. ಧೈರ್ಯಗುಂದಬೇಡ ಕಾವ್ಯ. ನಿನಗೆ ನಾವಿದ್ದೇವೆ. ನೀನೇನು ನಿರ್ಧರಿಸಿದರು ನಾವು ಬೆಂಬಲಿಸುತ್ತೇವೆ. ಅವನ್ನು ದಾರಿಗೆ ತರುವ ಯೋಚನೆ ಮಾಡೋಣ.

" ಇಲ್ಲ ಅಕ್ಕ. ನೀನೇನು ಯೋಚಿಸ ಬೇಡ. ಅವನನ್ನು ದಾರಿಗೆ ತರುವ ಅವಶ್ಯಕತೆ ನನಗಿಲ್ಲ. ನನ್ನ ಛಲ ಹಾಗು ಆತ್ಮ ವಿಶ್ವಾಸ ಯಾವತ್ತು ಬತ್ತುವುದಿಲ್ಲ. ನನ್ನ ವಿವೇಕ್ ನ ಮಧ್ಯೆ ಇಲ್ಲದ ಸಂಬಂಧ ಕಲ್ಪಿಸಿದ ಅವನು ಮನುಷ್ಯನೇ ಅಲ್ಲ. ನನಗೆ ಮೋಸ ಮಾಡಿ ನನ್ನ ಮೇಲೆ  ಕಪ್ಪು ಚುಕ್ಕೆ ಇಟ್ಟ  ಇವನು ನನ್ನ ಗಂಡನ ಸ್ಥಾನ ಇಂದಿಗೆ  ಕಳೆದುಕೊಂಡ. ಅವನಿಗೆ ಸರಿಯಾದ ಪಾಠ
ಕಲಿಸುವೆ. ಅವನು ಜೀವನ ಪೂರ್ತಿ ಕೋರ್ಟ್ ಅಲಿಯಬೇಕು, ಹಾಗೆ ಮಾಡುವೆ ನೋಡು ".

" ಸರಿ ಕಾವ್ಯ, ಆಕಾಶ್ ಬರುವ ಹೊತ್ತಾಯಿತು. ಅವನ ಜೊತೆ ಒಮ್ಮೆ ಮಾತಾಡು.  ಹುಷಾರು, ನಾನು ಬರುವೆ ಪುಟ್ಟಿ" ಎಂದು ಹಣೆಗೆ ಹೂ ಮುತ್ತನ್ನೊಂದಿಟ್ಟಲು  ಅಕ್ಕ.
ಮಂಚದ ಮೇಲೆ ಮಲಗಿದ್ದ ಅನುವನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತೆ. ನನ್ನ ಜೀವನ ಹಾಳಾಯಿತು. ಒಂಟಿಯಾಗಿ ಇದ್ದಿದ್ದರೆ ನೆಮ್ಮದಿಯಿರುತ್ತಿತ್ತು. ಎಷ್ಟು ಕನಸು ಕಟ್ಟಿದ್ದೆ. ಆಕಾಶ್ ನಂತ ಗೋಮುಖವ್ಯಾಘ್ರನಿಂದ  ನನ್ನ ಜೀವನ ಸರ್ವ ನಾಶವಾಯಿತು.
ಆದರು ಇವನಿಂದ ನನ್ನನ್ನು ನಾನು ಕೊಲ್ಲಲಾರೆ. ನನ್ನ ಜೀವನದ ಸುಮಧುರ ಕಾವ್ಯ ಶೋಕಗೇತೆಯಾಗಬಾರದು. ಇಂದು ವಿವೇಕ್ ನ ನಿಷ್ಕಲ್ಮಶ ಸ್ನೇಹದ ಬಗ್ಗೆ ಮಾತಾಡಿದ ಇವನು ನಾಳೆ ನನ್ನನ್ನು ಕೊಲ್ಲಲೂ  ಹೇಸುವುದಿಲ್ಲ. ಇವನೊಡನೆ ಬಾಳುವುದಕ್ಕಿಂತ ಗಂಡ ಬಿಟ್ಟವಳು ಎಂಬ ಪಟ್ಟವೇ ವಾಸಿ. ಸಂಸಾರ ಸುಖ ನನ್ನ ಹಣೆಯಲ್ಲಿ  ಬರೆದಿಲ್ಲ.  ದೇವರೇ ನನಗೆ ಧೈರ್ಯ ಕೊಡು ಎಂದು ಕಣ್ಮುಚ್ಚಿ ತೆರೆದಾಗ ನನ್ನ ಕಣ್ಣ ಮುಂದೆ ಎರಡು ನೆರಳು ಕಾಣಿಸಿತು. ಮುಂದಿದ್ದವರು ಆಕಾಶ್ ಮತ್ತು ಅಹಲ್ಯ.

" ಕಾವ್ಯ, ಇವಳೇ ಅಹಲ್ಯ ನನ್ನ   ಹೆಂಡತಿ. ಅವಳು ಇನ್ನು ಮುಂದೆ ಇಲ್ಲೇ ಇರುತ್ತಾಳೆ. ನಿನಗೆ ಈ ಮನೆಯಲ್ಲಿ ಜಾಗ ಬೇಕೆಂದರೆ ನಿನಗೆ ವಿವೇಕ್ ಗೆ ಹುಟ್ಟಿದ ಈ ಮಗುನ ಅನಾಥಾಶ್ರಮಕ್ಕೆ ಹೋಗಿ ಬಿಟ್ಟು ಬಾ." ಜ್ವಾಲಾಮುಖಿಯಂತೆ ನುಡಿದ ಆಕಾಶ್.

" ನಿನ್ನಂತ ಪಾಪಿಯ ನೆರಳು ನನ್ನ ಹಾಗು ಈ ಮಗುವಿನ ಮೇಲೆ ಬೇಡವೇ ಬೇಡ. ನಾನಿನ್ನು ಹೊರಡುವೆ" ಬಿರುಸಿನ ಹೆಜ್ಜೆ ಮುಂದಿಟ್ಟಾಗ ನನ್ನ ಕಾಲಿಗೆ ತಾಕಿದ್ದು ಅಹಲ್ಯ. ಅಹಲ್ಯ ನನ್ನ ಕಾಲು ಹಿಡಿದಿದ್ದಳು.

" ಕಾವ್ಯ, ದಯವಿಟ್ಟು ನನ್ನನು ಕ್ಷಮಿಸಿ. ನಿಮ್ಮ ಈ ದುರಂತ ಸ್ತಿತಿಗೆ  ನಾನೇ ಕಾರಣ.  ನನಗೆ ಆಕಾಶ್ ಬಿಟ್ಟರೆ ಬೇರೆ ಯಾರಿಲ್ಲ, ನಮ್ಮ ತಂದೆಯನ್ನು ಕಳೆದುಕೊಂಡೆ ಆದರೆ ಆಕಾಶ್ ನನ್ನು ಮತ್ತೆ ಪಡೆದೆ. ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ತಂದೆ ಆಕಾಶ್. ನಾನು ನಿಮ್ಮಷ್ಟು ಧೈರ್ಯಶಾಲಿಯಲ್ಲ. ನನಗೆ ಆಕಾಶ್ ಜೊತೆ ಬಾಳುವ ಆಸೆ ಇದೆ. ನಿಮ್ಮಂತಹ ಸದ್ಗುಣ ಸಂಪನ್ನೆಯೊಂದಿಗೆ ಬಾಳುವ ಅದೃಷ್ಟ ಆಕಾಶ್ ಗೆ ಇಲ್ಲ. ಆಕಾಶ್ ಗೆ ನಿಮ್ಮ ಮೇಲೆ ಈಗ ಯಾವ ಭಾವನೆಗಳು ಇಲ್ಲ. ನಿಮ್ಮನ್ನು ಸ್ನೇಹಿತೆಯಂತೆ ನೋಡಿದ್ದಾರೆ ಇಷ್ಟು ದಿನ. ಅವರು ನಿಮ್ಮನ್ನೂ ಬಿಡಲಾಗದೆ ನನ್ನನ್ನೂ ಸ್ವೀಕರಿಸಲಾಗದೆ ಒದ್ದಾಡಿದ್ದಾರೆ. ನಿಮ್ಮನ್ನು ದೂರ ಸರಿಸಲೆಂದೇ ನಿಮ್ಮ ಹಾಗು ವಿವೇಕ್ ನಡುವೆ ಸಂಬಂಧ ಕಲ್ಪಿಸಿ  ನಿಮ್ಮ ಮನಸ್ಸು ನೋಯಿಸಿದರು. ದಯವಿಟ್ಟು ಇದರ ಬಗ್ಗೆ ನೀವು ಅವರೊಡನೆ ಮಾತನಾಡ ಬೇಡಿ. ನೀವು ಮೋಸದ ಬೆಂಕಿಯಲ್ಲಿ ಬಿದ್ದೆ ಎಂಬ ಭಾವನೆಯಲ್ಲಿ ಬೇಯಬಾರದೆಂಬ  ಒಂದೇ ಕಾರಣಕ್ಕಾಗಿ ನಿಮಗಿದನ್ನೆಲ್ಲ ಹೇಳಿದೆ. ಅವರು ನಿಮಗೆ ಬಹಳ ಕೆಟ್ಟವರಾಗಿ ಕಂಡರೂ ನನ್ನ ಪಾಲಿಗೆ ಒಳ್ಳೆಯವರು.  ನನ್ನನ್ನು ಕ್ಷಮಿಸಿ".

" ಅಹಲ್ಯ, ಕ್ಷಮಿಸಲು ನಾನು ದೇವರಲ್ಲ. ನಾಳೆಯೇ ಡೈವೋರ್ಸ್ ನೋಟೀಸ್ ಕಳಿಸುವೆ. ನಾಳೆ ಮತ್ತೊಬ್ಬ ಹಳೆಯ ಪ್ರೇಯಸಿ ದೊರಕಿ ನಿನ್ನನ್ನು ಬಿಡದಿರಲಿ. Good  Bye ".

ಹೇಳಲು ಇನ್ನೇನು ಉಳಿದಿಲ್ಲ. ಅಹಲ್ಯಳನ್ನು ನಿಂದಿಸಲು ನನಗೆ ಹಕ್ಕಿಲ್ಲ.  ಪ್ರತಿಯೊಬ್ಬ ಹೆಣ್ಣಿಗೂ ಮದುವೆ ಮತ್ತು ಮಕ್ಕಳೇ ಜೀವನ.. ಆದರೆ ನನಗೆ ಮಗು ಹಾಗು ಡೈವೋರ್ಸ್ ಹೊಸ ಜೀವನವಾಗಿ ಕಂಡಿತು.

ಸೊಂಟದಲ್ಲಿದ್ದ ಅನು  ಹಾಗು ಬಲಗೈನ ಸೂಟ್ಕೇಸ್ ಭಾರ ಸಮವೆನಿಸತೊಡಗಿತು. ಕಣ್ಣಂಚಿನ ಕಂಬನಿ ಆವಿಯಾಯಿತು.
ಆಕಾಶ್ ಮುರಿದ ಆಶಾಗೋಪುರ ಅನುವಿನಿಂದ ಮತ್ತೆ ಬೆಳೆಯುತ್ತಿರುವಂತೆ ಭಾಸವಾಯಿತು....












No comments:

Post a Comment