Saturday, September 6, 2014

ನನ್ನೆದೆಯ ಕಾವ್ಯ

ತಿಳಿ ನೀಲಿ ಬಣ್ಣದ ಆಗಸವನ್ನೇ ಹೊದ್ದಂತಹ ಸೀರೆ, ನೀಳ  ಜಡೆಯುಳ್ಳ ಬಾಲೆ ಕಣ್ಣಿನಲ್ಲಿ ತೇಲಿ ಬಂದರೆ ಒಬ್ಬ ಬ್ರಮ್ಹಚಾರಿಗೆ ಕನಸಿನಲ್ಲಿ ಆನಂದಿಸಲು ಇನ್ನೇನು ಬೇಕು? ಆ ಸುಂದರಿಯ ಕಂಗಳ ದರ್ಶನವಾಗಿ ಮೊಗ ಪೂರ್ತಿ ನೋಡೋಣ ಎನ್ನುವಷ್ಟರಲ್ಲಿ ಮೊಳಗಿತು ಕರೆ ಗಂಟೆ ಕಿರ್ರ್ ಕಿರ್ರ್ ಎಂದು.

ಭ್ರಮಾ  ಜಗತ್ತಿನಲ್ಲಿ ತೇಲಾಡುತ್ತಿದ್ದ ಶ್ರೀವತ್ಸನಿಗೆ ಕಾಲಿಂಗ್ ಬೆಲ್ ಸದ್ದು ಬಡಿದೆಬ್ಬಿಸಿತು.

"ಇದು ಯಾರಪ್ಪಾ? ಬೆಳ್ಳಂಬೆಳಿಗ್ಗೆ ನನ್ನ ಕಾಡುತ್ತಿರುವವರು, ಸರಿಯಾಗಿ ನಿದ್ದೆ ಮಾಡಲೂ ಬಿಡೋಲ್ಲ. ಇನ್ಯಾರಿರುತ್ತಾರೆ? ಹಾಲಿನವನೇ ಇರಬೇಕು. ಕೊಡೊ ೧/೪ ಲೀಟರ್ ಹಾಲಿಗೆ ಮುಕ್ಕಾಲು ಭಾಗ ಪ್ರಾಣ ತಿನ್ನುತ್ತಾನೆ" ಎಂದು ಗೊಣಗುತ್ತ ಮುಸುಕು ತೆಗೆದು ಬಾಗಿಲತ್ತ ನಡೆದ  ಶ್ರೀವತ್ಸ.

ಬೆಡ್ ರೂಮಿನಿಂದ ಹೊರ ಬಂದು ಕಣ್ಣುಜ್ಜಿಕೊಳ್ಳುತ್ತ ಕದವನ್ನು ಬಿರುಸಿನಿಂದ ತೆಗೆದ ಶ್ರೀವತ್ಸ .

ಈವತ್ತು ಭಾನುವಾರ ರೀ ನನಗೆ ಕಾಫಿ ತಿಂಡಿ ಎಲ್ಲ ಪಕ್ಕದ ಮನೆಯಿಂದ ಪಾರ್ಸೆಲ್ ಬರುತ್ತೆ , ನಂಗೆ ಹಾಲು ಬೇಡ ಅಂತ ಹೇಳಿದ್ದು ನೆನಪಿಲ್ವಾ? ಎಂದು ಹಾಲಿನವನೆಡೆ ಜಗಳದ ದನಿ ಹಾಯ ಹೊರಟಾಗ ಕಂಡಿದ್ದು ಅದೇ ಕಂಗಳು! ಯಾವ ಕಂಗಳು ಕನಸಿನಲ್ಲಿ ಅರ್ಧ ದರ್ಶನ ನೀಡಿತ್ತೋ ಅಂತಹ ಚೆಲುವಾದ ಕಂಗಳು ಕಣ್ಮುಂದೆ ನಿಂತಿವೆ!
ಇನ್ನೂ ಕನಸಿನಲ್ಲಿರುವೆನೋ ವಾಸ್ತವಕ್ಕೆ ಬಂದಿದ್ದೇನೂ ಎಂದು ಮತ್ತೊಮ್ಮೆ ಕಣ್ಣುಜ್ಜಿ ನೋಡಿದರೆ " ಅರೇ! ಅದೇ ಸುಂದರಿ!".
ಮಾತಾಡಲು ಪದಗಳು ಹೊರಬರದೆ ತಡವರಿಸುತ್ತಿದ್ದವನ ಸ್ಥಿತಿಯ ಕಂಡು ಮುಗುಳ್ನಗುತ್ತಾ ಆ ಯುವತಿಯೇ ಬಾಯಿ ಬಿಟ್ಟಳು.

" ನಮಸ್ತೆ, ನಾನು ಕಾವ್ಯ. ನಿಮ್ಮ ಮೈಸೂರಿನವಳು. ನಿಮ್ಮ ತಾಯಿಯ ದೂರದ ಸಂಬಂಧಿ. ಒಳ ಬರಲು ಅವಕಾಶ ಕಲ್ಪಿಸಿಕೊಟ್ಟರೆ ನಿಮಗೆಲ್ಲವನ್ನೂ  ಪರಿಪೂರ್ಣವಾಗಿ ಹೇಳುವೆ" ಎಂದು  ಅವನ ಅನುಮತಿಗೂ ಕಾಯದೆ  ಒಳಗಡಿಯಿಟ್ಟಳು.

ಇನ್ನೂ ದಿಘ್ಬ್ರಮೆಯಲ್ಲಿದ್ದ ಶ್ರೀವತ್ಸನಿಗೆ ಅವಳನ್ನು ಹಿಂಬಾಲಿಸುವುದು ಹೊರತುಪಡಿಸಿ ದಿಕ್ಕು ತೋಚಲಿಲ್ಲ.

ಒಳ ನಡೆದು ಎರಡೆಜ್ಜೆ  ಮುಂದಿಟ್ಟು ಸೋಫಾದಲ್ಲಿ ಸುಖಾಸೀನಳಾದವಳೇ," ಒಂದು ಕಪ್ ಕಾಫಿ ಸಿಗುತ್ತಾ?" ಎಂದು ಶ್ರೀವತ್ಸನೆಡೆ ಕಣ್ಣು ಹೊರಳಿಸಿದಳು.

ಅತ್ತ ಕಲ್ಪನಾ ಸುಂದರಿ ಕಣ್ಣ ಮುಂದಿದ್ದಾಳೆ  ಅನ್ನುವ ಸಂತಸ ಒಂದೆಡೆ, ಇವಳ್ಯಾರೋ, ಏಕೆ ಬಂದಳೋ ಎನ್ನುವ ಗೊಂದಲದಲ್ಲಿ ಜೇಡರ ಬಲೆಯಲ್ಲಿ ಬಿದ್ದ ಜೇಡದಂತೆ ಒದ್ದಾಡಿದ ಶ್ರೀವತ್ಸ.

ಫ್ಲಾಸ್ಕ್ನಲ್ಲಿ ಉಳಿದಿದ್ದ ಸ್ವಲ್ಪ ಕಾಫಿಯನ್ನು ಬಿಸಿ ಮಾಡಿ ಕಾವ್ಯಳ  ಕೈಗಿತ್ತ ಶ್ರೀವತ್ಸ. "ಬಿಸಿ ಬಿಸಿ ಕಾಫಿ ಕುಡಿದ ನಂತರ ನಿಮ್ಮ ಪೂರ್ವಾಪರಗಳನ್ನ ತಿಳಿಸಿ. ಈಗ ಸದ್ಯಕ್ಕೆ ಈ ಬ್ಯಾಚುಲರ್ ಕೈ ಕಾಫಿ ಕುಡಿಯಿರಿ".

ಕೈಗಿತ್ತ ಕಾಫಿಯನ್ನು ಒಂದು ನಿಮಿಷದಲ್ಲಿ ಕುಡಿದು ಮುಗಿಸಿ, ಶ್ರೀವತ್ಸನತ್ತ ನಗೆ ಬೀರುತ್ತ ತನ್ನ ಪರಿಚಯಕ್ಕೆ ಮುಂದಾದಳು ಕಾವ್ಯ. " ನಾನು ನಿಮ್ಮ ತಾಯಿ ಪರಿಮಳ ಅವರ ಅಣ್ಣನ ಸಂಬಂಧಿ, ಅವರು ನನಗೆ ಅತ್ತೆ ಆಗ ಬೇಕು. ಕೆಲವು ತಿಂಗಳ ಹಿಂದೆ ನಿಮ್ಮ ತಾಯಿ ನಮ್ಮ ತಂದೆಯ ತಿಥಿಗೆ ಬಂದಿದ್ದರು. ಆ ದಿನ ನಿಮ್ಮ ಅನುಕೂಲ ಅನಾನುಕೂಲದ ಬಗ್ಗೆ ಚರ್ಚಿಸಿದ್ದರು. ನಮ್ಮ ಮನೆಯವರು ಹಾಗು ನಿಮ್ಮ ತಾಯಿಯವರದು ಬಹಳ ಹಳೆಯ ನಂಟು. ವಿಧಿಯಾಟ ನೋಡಿ ಹೇಗಿದೆ, ನಿಮ್ಮ ತಾಯಿಯ ಸಮ್ಮುಖದಲ್ಲಿ ಈ ಮನೆಗೆ ಬರಬೇಕೆಂದಿದ್ದ ನಾನು ಹೀಗೆ ಅವರ ಮರಣಾ ನಂತರ ಕಾಲಿಡಬೇಕಾಯಿತು. ಎಂತಹ ವಿಪರ್ಯಾಸ! ಈಗ ನಾನಿಲ್ಲಿ ಬಂದ ಕಾರಣ, ನನಗೆ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಇಲ್ಲಿ ಉಳಿದುಕೊಳ್ಳಲು ಬೇರೆ ಯಾರು ಸಂಬಂಧಿಕರಿಲ್ಲ. ದಯವಿಟ್ಟು ನನ್ನ training  ಮುಗಿಯುವವರೆಗೂ ನಿಮ್ಮ ಮನೆಯಲ್ಲಿ ಉಳಿಯಲು  ಅವಕಾಶ ನೀಡಿ ಎಂದು ವಿನಂತಿಸಿಕೊಳ್ಳುತೇನೆ. ಈ ಪರ ಊರಿನಲ್ಲಿ ನನಗೆ ಯಾರು ಪರಿಚಯವಿಲ್ಲ. ಪರಿಮಳತ್ತೆ ನಿಮ್ಮ ವಿಳಾಸ ಕೊಟ್ಟಿದ್ದರಿಂದ ಇಲ್ಲಿ ನನಗೆ ಆಶ್ರಯ ದೊರಕುತ್ತೆಂದು ನಿಮ್ಮನ್ನೇ ನಂಬಿ ಬಂದಿದ್ದೇನೆ. ದಯವಿಟ್ಟು ನಿರಾಕರಿಸ ಬೇಡಿ. ನಿಮ್ಮ ಈ ಉಪಕಾರವನ್ನು ಕಡೆ ಉಸಿರಿರುವವರೆಗೂ ಮರೆಯುವುದಿಲ್ಲ" ಎಂದು ಒಂದೇ ಸಮನೆ ಬಡಬಡಿಸಿದಳು ಕಾವ್ಯ.

ರೋಗಿ ಬಯಸಿದ್ದು ಹಾಲು ಅನ್ನ , ವೈದ್ಯ ಹೇಳಿದ್ದು ಹಾಲು ಅನ್ನ . ಪಾಲಿಗೆ ಬಂದ  ಸುವರ್ಣವಕಾಶವನ್ನು ಸಿಹಿ ಜೇನಿನಂತೆ ಸ್ವೀಕರಿಸುತ್ತಾ ಉಲ್ಲಾಸಭರಿತನಾದನು  ಶ್ರೀವತ್ಸ.

" ಅಮ್ಮನ ಸಂಬಂಧಿ ನೀವು. ನಿಮಗೆ ಬೇಕಾದಷ್ಟು ದಿನ ನನ್ನ ಅಥಿತಿಯಾಗಿ ಉಳಿಯಬಹುದು. ನಿಮ್ಮ ತಾಯಿಯ ಆಗಮನದ ನಂತರ ನಾನೇ  ಬೇರೆ ಮನೆ ಹುಡುಕಿ ಕೊಡುವೆ. ನನಗೆ ಯಾವುದೇ ಅಭ್ಯಂತರವಿಲ್ಲ. ನನಗೂ ಹೋಟೆಲ್ ಸಾಂಬಾರ್ ತಿಂದು ಸಾಕಾಗಿದೆ. ನಿಮ್ಮ ಕೈ ರುಚಿ ನೋಡುವ ಭಾಗ್ಯ ಲಭಿಸಿದೆಯಲ್ಲ ಅದಕ್ಕೆ ನಾನು ನಿಮಗೆ ಋಣಿ." ಎಂದು ಸಂತೋಷಿಸಿದನು ಶ್ರೀವತ್ಸ.

ಹೆಣ  ಭಾರದ ಸೂಟ್ ಕೇಸ್ ಹಾಗು ಕಿಟ್ ಬ್ಯಾಗ್ ಅನ್ನು ಶ್ರೀವತ್ಸನ ಎದಿರಿನ ಕೊಠಡಿಗೆ ಒಯ್ದಳು ಕಾವ್ಯ.

ಅನಿರೀಕ್ಷಿತ ಸುಂದರಿಯ ಆಗಮನದಿಂದ ತುಸು ಗಾಬರಿಯಲ್ಲೇ ಇದ್ದ ಶ್ರೀವತ್ಸ. ವಯಸ್ಸು ೨೧-೨೨ ಇರಬಹುದು. ನನಗಿಂತ ೩ ವರುಷ ಚಿಕ್ಕವಳೇ. ಪ್ರಾಯದ ಹುಡುಗಿಯರು ಹೇಗಿದ್ದರೂ ಚೆಂದವಲ್ಲವೆ? ಯಾವುದೇ ಹುಡುಗಿಯ ಸ್ನೇಹವಿಲ್ಲದ ಹುಡುಗನಿಗೆ ವಯೋ ಸಹಜ ಆಸೆಯೊಂದು ಕಾವ್ಯಳನ್ನು ನೋಡಿದ ಕ್ಷಣದಿಂದ ಹುಟ್ಟಿತು. ಅಮ್ಮ ಇವಳ ಬಳಿ ನನ್ನ ಬಗ್ಗೆ ಏನೇನು ಹೇಳಿದ್ದಳೋ  ಏನೋ. ಅಮ್ಮ ಜೀವಂತವಿದ್ದಿದರೆ ಕೇಳಬಹುದಿತ್ತು. ಬಹುಶಃ ಅಮ್ಮ ನಾನೊಂದು ವಿಚಿತ್ರ ಜೀವಿ ಅಂತ ನನ್ನ ವ್ಯಾಖ್ಯಾನ ಮಾಡಿರ ಬೇಕು. ಛೇ! ಎಂಥ ಕೆಲಸ ಆಯಿತು. ಇಂತ  ನಯನ ಮನೋಹರ ಸೊಸೆಯೊಬ್ಬಳು  ಅಮ್ಮನಿಗೆ ಇದ್ದಾಳೆ ಅಂತ  ಮೊದಲೇ  ತಿಳಿದಿದ್ದರೆ ಬ್ರಹಚರ್ಯಕ್ಕೆ ತರ್ಪಣವಿಟ್ಟು  ಚತುರ್ಭುಜನಾಗುತ್ತಿದ್ದೆನಲ್ಲ ಎಂದು ನಿಟ್ಟುಸಿರಿಟ್ಟನು. ಈಗಲೂ ಕಾಲ ಮಿಂಚಿಲ್ಲ. ಅವಳು ಅದು ಹೇಗೆ ನನ್ನ ಗಡಿ ದಾಟಿ ಹೋಗುತ್ತಾಲೊ ನೋಡೋಣ ಎಂದು ಸ್ನಾನ ಮುಗಿಸಿ ತಿಂಡಿ ತಿನ್ನಲು ಅಣಿಯಾದನು .

ಪುಟ್ಟದಾದ ಆ ಮನೆಯಲ್ಲಿ ಎಂದಿಗೂ ಇಲ್ಲದ ಉತ್ಸಾಹ ಕಳೆ  ಕಾವ್ಯ ಬಂದ ಒಂದು ತಿಂಗಳಲ್ಲಿ ಮನೆಯೆಲ್ಲ ಆವರಿಸಿತ್ತು.
ಹೆಣ್ಣಿಗೆ ಮನೆ,  ಸಂಸಾರ  ಮತ್ತು ಮಕ್ಕಳ ಪಾಲನೆ  ಕರಗತ. ಆ ನಿಜ ರೂಪವನ್ನ ಕಾವ್ಯಳಲ್ಲಿ ಕಾಣ ಹೊರಟ  ಶ್ರೀವತ್ಸ.

ನನ್ನನ್ನು ಅವಳು  ನಿರಾಕರಿಸುವುದಿಲ್ಲ ಅನ್ನುವ ವಿಶ್ವಾಸ ಚಿಗುರೊಡೆದಿತ್ತು. ಬಿದಿಗೆಯ ಚಂದ್ರನಂತಹ ಮುಖ, ಸೊಂಪಾದ ಗುಂಗುರು ಕೂದಲು, ನೀಳ  ನಾಸಿಕ, ಅಗಲವಾದ ಕಣ್ಣು, ಎಂಥ ಹುಡುಗಿಯೂ ಬೀಳಬೇಕು ಅಂಥ  ಸುರುದ್ರೂಪಿ ಶ್ರೀವತ್ಸ.
ದಿನ ಕಳೆದಂತೆ ಕಾವ್ಯ ಶ್ರೀವತ್ಸನನ್ನು  ಆವರಿಸಲಾರಂಭಿಸಿದಳು. ಅವಳ ಸಿಹಿ ನುಡಿಗಳು ಅವನಿಗೆ ಮತ್ತು ತರಿಸುತ್ತಿತ್ತು. ಅನು ದಿನವೂ ಭ್ರಮೆಯಲ್ಲಿ ಜೀವಿಸುತ್ತಿದ್ದವನಿಗೆ ಎಲ್ಲಿ ಕಾವ್ಯಳು ಭ್ರಮೆಯಾಗುತ್ತಾಳೋ ಎಂಬ ದಿಗಿಲು ಶುರುವಾಯಿತು.
ಇತ್ತೀಚೆಗೆ ಆಕೆಯ ನಡವಳಿಕೆಯಲ್ಲಿ ಬದಲಾವಣೆ ಕಾಣುತ್ತಿದೆ. ಬೆಳಿಗ್ಗೆ ಎದ್ದು ಮನೆಯೆಲ್ಲ ಗುಡಿಸಿ, ಒರೆಸಿ, ಅಂಗಳದಿ ರಂಗೋಲಿ ಹಾಕಿ, ಅಡಿಗೆ ಮಾಡಿ ಕೆಲಸಕ್ಕೆ ಹೋಗಿ ಬರುತ್ತಿದ್ದವಳು ಸ್ವಲ್ಪ ಸಿಡುಕುವುದು ಮೊದಲು ಮಾಡಿದ್ದಾಳೆ.  ನಿಜವಾಗಲೂ  ಅವಳು ಬದಲಾಗಿದ್ದಲೋ ಅಥವಾ ನನ್ನ ಅತಿ ಪ್ರೀತಿ ಕಲ್ಪನೆಗೆ ಎಡೆ ಮಾಡಿಕೊತ್ತಿದೆಯೋ, ಏನೇ ಇರಲಿ,  ಆದಷ್ಟು ಬೇಗ ತನ್ನ ಮನದ ಮಾತು ಹೇಳಬೇಕು ಎಂದು ನಿರ್ಧರಿಸಿದ ಶ್ರೀವತ್ಸ.

ಅಂದು ಭಾನುವಾರ. ಹೇಗಿದ್ದರೂ ರಜಾ , ನಿಧಾನಕ್ಕೆ ಎದ್ದರೆ ಆಯಿತು ಎಂದು ಆಲಸ್ಯದಿ  ೯ ಗಂಟೆಗೆ ಮೇಲೆದ್ದ ಶ್ರೀವತ್ಸನಿಗೆ ಕಾವ್ಯಳ ಸುಳಿವೇ ಸಿಗಲಿಲ್ಲ. ಡೈನಿಂಗ್ ಟೇಬಲ್ ಮೇಲೆ ಬಿಸಿಯಾದ ಉಪ್ಪಿಟ್ಟು ಕಾಯುತ್ತಿತ್ತು. ಅದರೊಂದಿಗೆ ಒಂದು ಚೀಟಿ ಸಹ ಇತ್ತು. ನಡುಗುವ ಕೈಯ್ಯಿಂದ ಚೀಟಿಯನ್ನು ಬಿಚ್ಚಿ ಓದಲಾರಂಭಿಸಿದ ಶ್ರೀವತ್ಸ.

" ಪ್ರಿಯ ಶ್ರೀವತ್ಸ ಅವರೇ, ನಿಮಗೆ ತಿಳಿಸದೇ ಮನೆಯಿಂದ ಈಚೆ ಹೋಗಿದ್ದಕ್ಕೆ ಕ್ಷಮೆಯಿರಲಿ. ಹೊಸತರಲ್ಲಿ  ಬೆಂಗಳೂರು ಬೇಸರವೆನಿಸುತ್ತಿತ್ತು. ಈಗ ನನಗೆ ಸಾಕಷ್ಟು ಸ್ನೇಹಿತರು ದೊರಕಿದ್ದಾರೆ. ದಿನವೆಲ್ಲಾ  ಜೊತೆಯಿದ್ದರು ಮತ್ತೆ ಮತ್ತೆ ಅವರೊಟ್ಟಿಗೆ ಸಮಾಯ ಕಳೆಯ ಬೇಕೆಂಬ ಹಂಬಲ. ಇಲ್ಲಿಯ ಜನ ನನಗೆ ಮೋಡಿ ಮಾಡಿಬಿಟ್ಟಿದ್ದಾರೆ. ಈ ಬ್ಯುಸಿ ಲೈಫ್ ಒಂಥರಾ ಖುಷಿ ಕೊಡ್ತಾ ಇದೆ. ಇವತ್ತು  ನನ್ನ ಸ್ನೇಹಿತೆಯ ಮದುವೆ. ಹಾಗಾಗಿ ಅವಳ ಪರ ಸಹಿ ಹಾಕಲು ರಿಜಿಸ್ಟರ್ ಆಫೀಸ್ಗೆ ಹೋಗಿರುವೆ.
ನಿಮಗಿದೆಲ್ಲಾ ತಿಳಿಸ ಬೇಕೆಂದು ನನಗು ಇತ್ತು. ಆದರೆ ನೀವು ಬಹಳ ಸಂಕೋಚ ಸ್ವಭಾವದವರು ಅಥವಾ ನನ್ನ ಮೇಲೆ ಯಾವುದೇ ಆಸಕ್ತಿ ನಿಮಗಿಲ್ಲ ಅನ್ನಿಸುವುದು. ಮುಖತಃ ನಿಮ್ಮೊಡನೆ ಮಾತಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ಈ ಪತ್ರ.

ನಾನು ನಿಮ್ಮ ಮನೆಗೆ ಒಂದು ಸ್ವಾರ್ಥ ಉದ್ದೇಶದಿಂದ ಬಂದೆ. ನಿಮ್ಮ ತಾಯಿಯ ಕೊನೆ ಆಸೆ ನನ್ನನ್ನು ಮನೆ ಸೊಸೆಯಾಗಿ ನೋಡುವುದಾಗಿತ್ತಂತೆ. ನಮ್ಮ ಅಮ್ಮ ನಿಮ್ಮ ತಾಯಿಗೆ ಕೊಟ್ಟ ಮಾತು ನನ್ನನ್ನು ಇಲ್ಲಿಗೆ ಬರಸೆಳೆಯಿತು. ನಿಮ್ಮ ಅಸಹಾಯಕ ಒಂಟಿ ಜೀವನದ ಅರಿವಿದ್ದ ನನ್ನ ತಾಯಿ ಕೆಲಸದ ನೆಪದಲ್ಲಿ ಇಲ್ಲಿಗೆ ಕಳಿಸಿದರು. ನನಗೆ ಇಷ್ಟವಿಲ್ಲದಿದ್ದರೂ ಅಮ್ಮನ ಒತ್ತಾಯಕ್ಕೆ ಮಣಿದು ನೀವು ಗುಣವಂತರೆಂದು ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮೊಡನೆ  ಒಂದೇ ಗೂಡಿನಲ್ಲಿ  ಉಳಿದೆ. ನಮ್ಮಮ್ಮನಿಗೆ  ನಿಮ್ಮ ವಂಶದ ಬಗ್ಗೆ ಅಪಾರ ಗೌರವ.

ನಾನು ಇಲ್ಲಿಗೆ ಬಂದ  ಹೊಸತರಲ್ಲಿ ನಿಮ್ಮನ್ನು ಆಕರ್ಷಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ನಿಮಗೆ ಇಷ್ಟವಾದ ಬಣ್ಣದ ಬಟ್ಟೆ ಉಡುವುದು,  ನಿಮ್ಮಿಷ್ಟದ ಅಡುಗೆ, ನಿಮ್ಮಿಷ್ಟದ ಪುಸ್ತಕ ಓದುವುದು, ಎಲ್ಲವೂ ನಿಮ್ಮಿಚ್ಹೆಯಂತೆ ನಡೆದೆ. ಪ್ರತಿ ದಿನ ನಿಮಗೆ ಕಾಫಿ ನೀಡುವಾಗ  ಮೊದಲು ನಾನು ಕುಡಿದು ನಿಮಗೆ ಕೊಡುತ್ತಿದ್ದೆ. ನಿಮ್ಮ ಮುಂದೆಯೇ  ಕದ್ದು ಮಾಡಿದಂತೆ ನಟಿಸುತ್ತಿದ್ದೆ. ಒಮ್ಮೆಯಾದರು ಗುರುತಿಸಿದಿರಾ? ಒಮ್ಮೆಯಾದರು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡಿರಾ? ಒಮ್ಮೆ ನೀವು ಆಫೀಸಿನಿಂದ ರಾತ್ರಿ ಹತ್ತಾದರೂ ಬರದಿದ್ದಾಗ ನಾನು ಪಟ್ಟ ಪಾಡೆಷ್ಟು! ಅದೆಷ್ಟು ಆತಂಕದಲ್ಲಿದ್ದೆ! ನಿಮ್ಮೆಡೆಯಿಂದ ಅಸಡ್ಡೆ ಒಂದೆ ನನಗೆ ಸಿಕ್ಕಿದ್ದು. ಹೆಣ್ಣಿನ ಮನಸ್ಸು ನಿಮಗೆ  ಅರ್ಥವಾಗಲ್ಲ ಬಿಡಿ.  ನಿಮ್ಮದು ಕಲ್ಲು ಮನಸ್ಸು. ನನ್ನ ಹುಡುಗ ನನ್ನ ಬಿಟ್ಟು ಬೇರೆ ಹೆಣ್ಣನ್ನು ನೋಡಬಾರದು, ನನ್ನ ಎಲ್ಲ ಪ್ರೀತಿಯನ್ನು ಧಾರೆಯೆರೆಸಿಕೊಳ್ಳಲು ಕಾದಿರಬೇಕು, ನನ್ನ ಭಾವಕ್ಕೆ ಭಾವ ಸೇರಿಸಿ ಉಸಿರಲ್ಲಿ ಉಸಿರಾಗ ಬೇಕು, ನನ್ನನ್ನು ಅವನು ಎಷ್ಟು ಪ್ರೀತಿಸುತ್ತಾನೆ ಅನ್ನುವದು ಮುಖ್ಯವಲ್ಲ, ನನ್ನ ಮುಗ್ಧ ಪ್ರೇಮಕ್ಕೆ ಬೆಲೆ ಕೊಟ್ಟರೆ ಸಾಕು ಎಂದು  ದೇವರಲ್ಲಿ ಮೊರೆಯಿಡುತ್ತಿದ್ಧೆ.

ಮನಸೋತು  ಬಂದ ಹೆಣ್ಣಿಗೆ ಬೆಲೆಯಿಲ್ಲದೆಡೆ ಬೇರಾವುದಕ್ಕೂ ಬೆಲೆ ಇರುವುದಿಲ್ಲ. ಏಕೆಂದರೆ ಹೆಣ್ಣಿನ ಮನಸ್ಸು ಬೆಲೆ ಕಟ್ಟಲಾಗದ ವಸ್ತು.  ಎಣಿಕೆಗೆ ಸಿಕ್ಕದ ಮೀನಿನ ಹೆಜ್ಜೆಯಂತೆ. ನಿಮ್ಮನ್ನು ನಾನು ಪ್ರೀತಿಸಿದೆ ಎಂದು ತಿಳಿಯುವ ಬದಲು ನನ್ನ ಬಲವಾದ ಭಾವನೆಗಳನ್ನ ನಾನು ಪ್ರೀತಿಸಿದೆ. ಅದನ್ನು ನನ್ನಲ್ಲೇ ಪಾಲಿಸಿ, ಪೋಷಿಸಿದೆ. ಆದರೆ ಆ ಪ್ರೀತಿಯನ್ನು ಸರಿಯಾದ ವ್ಯಕ್ತಿಗೆ ನೀಡಲಿಲ್ಲ ಎನ್ನುವುದೊಂದೇ ಕೊರಗು.

 ಮತ್ತೊಂದು ಸಿಹಿ ಸುದ್ದಿಯೆಂದರೇ, ನನ್ನ ಗೆಳತಿಯ ಮದುವೆ ಮಂಟಪದಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರುತ್ತಿದ್ದಾರೆ. ಹುಡುಗ ನನ್ನ colleague ಆಕಾಶ್, ಹುಡುಗಿ ನಾನೇ ಎಂದು ಸ್ಪಷ್ಟೀಕರಣ ನೀಡುವ ಅವಶ್ಯಕತೆ ಇಲ್ಲ ಎಂದು ಭಾವಿಸುವೆ.
ಆಕಾಶ್ ಬಹಳ ಒಳ್ಳೆಯ ಹುಡುಗ ಮತ್ತು ಭಾವನಾ ಜೀವಿ. ನನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾರೆ.
ನೀವು ನನ್ನನ್ನು ಒಂದು ದಿನ ಪ್ರೀತಿಸಿದ್ದರೂ ನನ್ನ ಮುಂದೆ ವ್ಯಕ್ತವಾಗುತ್ತಿತ್ತು. ಆದರೆ ನಿಮಗೆ ನಾನು ಎಂದಿಗೂ ಹಿಡಿಸಲಿಲ್ಲ.
ನನ್ನ ಪ್ರೀತಿ ಹಾಗು ಸಂಪೂರ್ಣ ಜೀವನವನ್ನ ನನ್ನನ್ನು ಪ್ರೀತಿಸಿದ ಅಮೂಲ್ಯವಾದ ವ್ಯಕ್ತಿಗೆ ಅರ್ಪಿಸುತ್ತಿದ್ದೇನೆ.

ಇಂತಿ,

ಕಾವ್ಯ


ಪತ್ರ ಕೈಯಿಂದ  ಜಾರಿ  ಬಿದ್ದು ಉಸಿರು ಕಟ್ಟಿದಂತಾಯಿತು. ನನ್ನ ಹುಡುಗಿ ಬೇರೆಯವನ ಬಾಳ  ಸಂಗಾತಿಯಾ? ಖಂಡಿತಾ ಸಾಧ್ಯವಿಲ್ಲ. ನಾನು ಈಗಲೇ ಕಲ್ಯಾಣ ಮಂಟಪಕ್ಕೆ ಹೊರಡುವೆ ಎಂದು ಕೈ ಬೀಸಿದಾಗ ಶ್ರೀವತ್ಸನ ಕೈಗೆ ಸಿಕ್ಕಿದ್ದು ಮೇಜಿನ ಮೇಲಿದ್ದ ಹೂದಾನಿ. ಕೈ ಮೇಲೆಲ್ಲಾ ನೀರು ಚೆಲ್ಲಿ ಬಟ್ಟೆ ಒದ್ಹೆಯಾಗಿ  ಧಡಕ್ಕನೆ ಎದ್ದ ಶ್ರೀವತ್ಸ.

ಇದೇನಿದು? ಇಷ್ಟು ಹೊತ್ತು ಕಂಡಿದ್ದು ಕಂಡಿದ್ದು ಕನಸೇ? ಛೇ! ಎಂತಹ  ದೊಡ್ಡ ಕನಸು! ಈ ಬಾರಿ ಮತ್ತೆ ಕರೆ ಗಂಟೆ ಮೊಳಗಿತು. ಹಾಲಿನ  ಪಾತ್ರೆ ಹಿಡಿದು ಬಾಗಿಲಿನತ್ತ ನಡೆದ ಶ್ರೀವತ್ಸ. 2 comments:

  1. Given the Timeline and at that age, you had a very good grip in writing. aagale Inception movie kathe bardidiya. chennagide and at the same time message kooda ide. Feeling helodu late madidre, innobruge chance anta..:) Nice

    ReplyDelete
  2. Thanks for constantly encouraging my writing :-) It means a lot Abhi! Thanks again!

    ReplyDelete