Monday, January 23, 2012

ನನ್ನ ಅಜ್ಜಿಯ ನೆನಪು

ನೆನ್ನೆ ಹೀಗೆಯೇ ಮಾತಿಗೆ ಮಾತು ಬೆಳೆದು ನನ್ನ ಪತಿಯೊಡನೆ ಹಳೆಯ ನೆನಪುಗಳ ಬುತ್ತಿಗೆ ಅರಿವಿಲ್ಲದೆಯೇ ಕೈ ಹಾಕಿದೆ.
ಆ ಸವಿ ನೆನಪುಗಳನ್ನು ಪದಗಳಲ್ಲಿ ಮೂಡಿಸಬೇಕೆಂಬ ಹಂಬಲದಿಂದ ಈ ಕಿರು ಲೇಖನ.

ಆಕೆ ಹೋಗಿ ಸುಮಾರು ಮೂರುವರೆ ವರುಷಗಳು ಕಳೆದು ಹೋಯ್ತು. ಆದರು ಆಕೆಯ ಮುಖದ ಮಂದಹಾಸ ನನ್ನ ಕಣ್ಮುಂದೆಯೇ ಇಂದಿಗೂ ಕಾಡುತ್ತಾ ಇದೆ. ದುಂಡು ಮುಖ, ಕಾಸಿನಗಲದ ಕುಂಕುಮ, ನೀಳ  ಮೂಗು, ಮೂಗಿನಗಲದ ಮೂಗುತಿ, ಕೆಂಪು ಮೈ ಬಣ್ಣ, ಕಣ್ಣಿನಾಳದಿ ಇಣುಕಿದರೆ ಎಂದಿಗೂ ಬತ್ತದ ಪ್ರೀತಿ, ಒಡೆಯದ ಸಹನೆ, ಇವು ನನ್ನ ಅಜ್ಜಿಯನ್ನು ವರ್ಣಿಸಲಿರುವ ಕೆಲವು ಪದಗಳು. ಆಕೆಯ ಆ ಗಾಂಭೀರ್ಯತೆ ಹಾಗು ಸಹನೆ ಎಂಥವರಿಗೂ "ಹೆಣ್ಣೆಂದರೆ ಹೀಗಿರಬೇಕು ಎನ್ನುವಂತಹುದು.

ನನಗೆ ಬಾಲ್ಯದಿಂದ ಅಜ್ಜಿ, ತಾತ (ಅಮ್ಮನ ತಂದೆ & ತಾಯಿ ) ಅಂದರೆ ಬಹಳ ಅಕ್ಕರೆ. ನನ್ನ ಬಾಲ್ಯ ಪೂರ್ತಿ ಅವರೊಡನೆ ಕಳೆದಿದ್ದರಿಂದೋ ಏನೋ ಅಜ್ಜಿಯೆಡೆ    ನನಗೆ ಬಲು ಸಲಿಗೆ.
ನಾನು ಚಿಕ್ಕವಳಿದ್ದಾಗ ಬಲು ಹಠಮಾರಿಯಿದ್ದೆನಂತೆ. ಜಳಕ ಮಾಡಲು ಹೋದಾಗಲೆಲ್ಲ ಅಮ್ಮನಿಂದ ಏಟು. ನನಗೆ ಅಜ್ಜಿಯೇ ಸ್ನಾನ ಮಾಡಿಸಲಿ ಎಂದು ಹಠ. ಅಮ್ಮನ ಒರಟು ಕೈಗಿಂತ, ಅಜ್ಜಿಯು  ಮೃದು ಹಸ್ತದಿಂದ ತಲೆ  ಉಜ್ಜಿದರೆಯೇ ಸ್ನಾನವಾದಂತೆ ಸಮಾಧಾನ. ಅಜ್ಜಿಯೇ ಉಣಿಸಬೇಕು, ಅಜ್ಜಿಯೇ ಬಟ್ಟೆ ತೊಡಿಸಬೇಕು, ಅಜ್ಜಿಯೇ ಲಾಲಿಸಿ, ಪಾಲಿಸಿ ಮುದ್ದಿಸಬೇಕೆಂಬ ಹಠ.

ನನಗೆ ಇಂದಿಗೂ ನೆನಪುಂಟು. ಬೇಸಿಗೆ ರಜೆಗೆಂದು ನಾನು, ನನ್ನ ತಮ್ಮ ಹಾಗು ನನ್ನ ದೊಡ್ಡಮ್ಮನ ಮಕ್ಕಳು ಬಾನು ಅಣ್ಣ, ಅಚ್ಚಿ ಯಾವಾಗಲು ಸೇರುತ್ತಿದ್ದೆವು. ಪ್ರತಿ ರಾತ್ರಿ ಮನೆಯ ಹಿತ್ತಲಲ್ಲಿ ಚಾಪೆ ಹಾಸಿ ಕುಳಿತು, ಅಜ್ಜಿಯ ಕೈ ತುತ್ತಿಗಾಗಿ ಕಾಯುತ್ತಿದ್ದೆವು. ನಮ್ಮಜ್ಜಿ ಕಲಸಿದ ಮೊಸರನ್ನದಲ್ಲಿ  ಅಮೃತವಿದ್ದಂತೆ ಭಾಸವಾಗುತ್ತಿತು. ಇಂದಿಗೂ ಮೊಸರನ್ನ ಕಲಸಿದಾಗ ಆಕೆ ನೆನಪಾಗುವಳು. ಅಜ್ಜಿ ನಮಗೆ ಕಥೆ ಹೇಳ ಹೊರಟರೆ ಕಥೆ  ಮುಗಿಯುವವರೆಗೂ  ನೂರಾರು ತುತ್ತು ಮುಗಿಯುತ್ತಿತು. ಮೊಮ್ಮಕ್ಕಳು ಹೊಟ್ಟೆ ತುಂಬಾ ಊಟ ಮಾಡಲಿ ಎಂದು ಅಜ್ಜಿ ಬಳಸುತಿದ್ದ "trick" ಆ ಕಥೆಗಳು. ಕಥೆ ಕೇಳುತ ಕೇಳುತ ಅದರಲ್ಲೇ ಎಷ್ಟು ಮುಳುಗುತ್ತಿದ್ದೆ ಎಂದರೆ ಆ ಕಥೆಯ ಒಂದು ಪಾತ್ರವೇ ಆಗಿಬಿಡುತ್ತಿದ್ದೆ. 

ನಾನು ಬೆಳೆದು ಕಾಲೇಜ್ ವ್ಯಾಸಂಗ ಮಾಡುವವರೆಗೂ ಆಕೆಯ ಕೈ ತುತ್ತು ಹಾಗು ಕಥೆ ಕೇಳಿದ ಅದೃಷ್ಟ ನನ್ನದು.
ನನಗೆ ಮಹಾಭಾರತ, ರಾಮಾಯಣ ಪರಿಚಯವಾಗಿದ್ದೇ ಅಜ್ಜಿಯಿಂದ. ಅಜ್ಜಿಯೊಡನೆ ಅಟಗುಣಿ ಮಣೆ ಆಟ ಆಡುವುದೆಂದರೆ ಬಲು ಮಜಾ ಬರುತ್ತಿತು. ಆಕೆಯೊಡನೆ ಆಡಿ ಗೆದ್ದರೆ ಏನೋ ಸಾಧಿಸಿದಷ್ಟು ತೃಪ್ತಿ ಸಿಗುತ್ತಿತು.

ಪ್ರತಿ ಹುಟ್ಟಿದ ಹಬ್ಬಕ್ಕೂ ಅಜ್ಜಿಯಿಂದ ಕಾಣಿಕೆ ಪಡೆದಿದ್ದೇನೆ. ಆದರೆ ನಾನು ಮರೆಯಲಾಗದ ಹುಟ್ಟು ಹಬ್ಬವೆಂದರೆ 2008ರ ಹುಟ್ಟಿದ ಹಬ್ಬ. ಅಜ್ಜಿ ಕಾಯಿಲೆಗಳ ಸುಳಿಗೆ ಸಿಕ್ಕಿ ಬಹು ಒದ್ದಾಡುತ್ತಿದ್ದಳು. ಆಕೆಗೆ ಅದೆಷ್ಟೋ operations ಆಗಿದ್ದವು. ನಾನು ದೇವರಲ್ಲಿ ಯಾವಾಗಲು ಬೇಡುತ್ತಿದ್ದೆ, ಅಜ್ಜಿ ನಮ್ಮನಗಲಿ ಹೋದರೆ ನಾನು ಆಕೆಯನ್ನು ನೋಡಬಾರದು, ಎಲ್ಲಾದರೂ ದೂರ ಇರಬೇಕೆಂದು. ಯಾಕೆಂದರೆ ಆ ನೋವನ್ನು ಸಹಿಸುವ ಶಕ್ತಿ ನನ್ನಲ್ಲಿರಲಿಲ್ಲ. 
August16 , 2008 ರಂದು  ಅಜ್ಜಿ ನನಗೆ 501  ರೂಪಾಯಿ ಕೊಟ್ಟು ಆಶೀರ್ವದಿಸಿದ್ದೆ   ಆಕೆಯ ಕಡೆ ಆಶೀರ್ವಾದ. ವಿಧಿಯಾಟ, ನನ್ನ ಹುಟ್ಟು ಹಬ್ಬದ ರಾತ್ರಿಯೇ ಅಜ್ಜಿ ತುಸು ಮೆತ್ತಗಾದಳು. ಮರುದಿನ  ಬೆಳಿಗ್ಗೆ ಆಕೆ ಸರಿ ಹೋಗಿರುತ್ತಾಳೆಂಬ ಆಸೆಯಿಂದ ಹೋದರೆ ಆಕೆ ಮತ್ತಷ್ಟು ಸೊರಗಿ ಹೋಗಿದ್ದಳು. ಆಕೆ ಕೊನೆಯುಸಿರೆಳೆಯುವಾಗ ಆಕೆಯ ಬಳಿಯಿದ್ದವಳು ನಾನೊಬ್ಬಳೇ. ನನ್ನ ಕೈಯಲ್ಲೇ ತುಳಸಿ ನೀರು ಕುಡಿದು , ನನ್ನ ಕೈ ಹಿಡಿದು ಈ ಲೋಕ ತ್ಯಜಿಸಿದಳು ನನ್ನ ಪ್ರೀತಿಯ ಅಜ್ಜಿ....ಅಂದಿಗೂ, ಇಂದಿಗೂ, ಎಂದೆಂದಿಗೂ ಅದು ನನಗೆ ಮರೆಯಲಾಗದ ನೋವು. 


ಆಕೆಯ ಪ್ರೀತಿ ಅಮೃತದಷ್ಟು ಸಿಹಿ. ಆಕೆಯ ಮನಸು ಅಪ್ಪಟ ಚಿನ್ನ. ತನ್ನವರಿಗೆಂದೇ ಮುಡಿಪಿಟ್ಟ ಜೀವ ಅದು. ಆಕೆ ನಕ್ಕರೆ ಆಕೆಯ ದಪ್ಪ ಹೊಟ್ಟೆ ಕುಣಿಯುತ್ತಿತ್ತು. ಕೆಲವೊಮ್ಮೆ ಆಕೆಯನ್ನು ನಗಿಸಿ ಅವಳ ಹೊಟ್ಟೆ ಕುಣಿದಾಗ ಅದರ ಮೇಲೆ ಮಲಗುತ್ತಿದ್ದಿದುಂಟು. ಏನೇ ಆಗಲೀ ಆಕೆಯ ನೆರಳು ನನ್ನ ಬೆನ್ನ ಹಿಂದೆಯೇ ಇದ್ದಂತೆ ಭಾಸವಾಗುತ್ತದೆ. ಹೆಜ್ಜೆ ಹೆಜ್ಜೆಗೂ ಆಕೆ ನನ್ನನ್ನು ರಕ್ಷಿಸುತ್ತಿದ್ದಾಳೆeನೋ ಎಂದು ಭಾವಿಸುತ್ತೇನೆ. ಅವಳನ್ನು, ಅವಳ ಪ್ರೀತಿಯನ್ನು ಇಂದಿಗೂ ಹಂಬಲಿಸುತ್ತೇನೆ.

ಅಜ್ಜಿ, ನೀನೆಲ್ಲಿರುವೆಯೋ ನಾ ಕಾಣೆ.. ಆದರೆ ನಮಗಾಗಿ ಮತ್ತೆ ಹುಟ್ಟಿ ಬರುವೆಯಾ? ಒಮ್ಮೆ ಪ್ಲೀಸ್........


2 comments:

  1. Super kane.. I like the way u presented and the words u used!! Amazing and yes, as i read it i went into imagination....:):)

    ReplyDelete
    Replies
    1. Hmmmmmm, thanx for ur appreciation.. Infact I was not that confident to post this!! N u made it easy for me by reviewing!!

      Delete